ಕಳೆದ ಗುರುವಾರ ಬೆಳಗ್ಗೆ ಸ್ವಾತಂತ್ರ್ಯೋತ್ಸವವನ್ನು ವನಿತಾಸದನದ "ಅಣ್ಣ ಮಂಟಪ"ದ ಆವರಣದಲ್ಲಿ ಶ್ರೀಮತಿ ಎನ್. ಭಾರತಿಯವರ ಘನನೇತೃತ್ವದಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು. ಸ್ವಾತಂತ್ರ್ಯ ಆಂದೋಲನಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಸಂಸ್ಥೆಯ ಸ್ಥಾಪಕರನ್ನೂ, ಅವರ ಸಹವರ್ತಿಗಳನ್ನೂ ಆದರದಿಂದ ಸ್ಮರಿಸಿ ಪ್ರಾರಂಭಿಸಿದ ಈ ಸಮಾರಂಭದಲ್ಲಿ, ಹಿಂದೊಮ್ಮೆ ಇಲ್ಲಿ ಓದಿ, ಮುಂದಕ್ಕೆ ಅಮೇರಿಕೆಯಲ್ಲಿ ಯಶಸ್ವಿ ರಸಾಯನವಿಜ್ಞಾನಿಯಾದ, “ಡಾ. ಆರ್. ಎಸ್. ಶ್ರೀಧರಮೂರ್ತಿ” ಮತ್ತು ಮೈಸೂರಿನ ಸಾರ್ವಜನಿಕ ಜೀವನದಲ್ಲಿ ಮುಖಂಡರಾಗಿಯೂ, ಪ್ರಗತಿಪರ ಕೃಷಿಕರಾಗಿಯೂ ಮಾನ್ಯರಾದ “ಶ್ರೀ ಪಿ. ಜಯರಾಜ ಹೆಗ್ಡೆ”, ಇಬ್ಬರೂ ಮುಖ್ಯ ಅತಿಥಿಗಳಾಗಿ ಆಗಮಿಸಿ "ತಿರಂಗ ಹಬ್ಬದ ರಂಗೇರಿಸಿದರು"; ಶ್ರೀಧರಮೂರ್ತಿಯವರ ಜನ್ಮದಿನಾಚರಣೆಯ ಸಂಯೋಗವು ಸಮಾರಂಭವನ್ನು ವಿಶೇಷವಾಗಿಸಿತು. ಶಾಲೆಯ ಮಕ್ಕಳ "ಬ್ಯಾಂಡ್"ನಿಂದ ಗೌರವ ರಕ್ಷೆ ಮತ್ತು ಪಥ ಸಂಚಲನ, ಪಿರಮಿಡ್ ರಚನೆ, ಲೆಜ಼ಿಮ್ ನೃತ್ಯ, ಏಕಪಾತ್ರಾಭಿನಯ, “rhythmic ಯೋಗಾಸನ”, ಈ ಉತ್ಸವಕ್ಕೆಂದೇ ಶ್ರೀಮತಿ ಭಾರತಿಯವರು ರಚಿಸಿದ್ದ ಗೀತೆಯ ಗಾಯನ ಮೊದಲಾದ ವೈವಿಧ್ಯಮಯ-ವರ್ಣರಂಜಿತ ಪ್ರಸ್ತುತಿಗಳು ಸಮಾರಂಭವನ್ನು ಬಹಳ ಆಕರ್ಷಕವಾಗಿಸಿದುವು.







