ವಿಶ್ವದಮಹಾವಿಸ್ಮಯಹೆಲನ್ಕೆಲರ್:ಸಾಹಿತಿಬನ್ನೂರುರಾಜು

ಮೈಸೂರು: ತನ್ನ ಅಂದತ್ವ ಮತ್ತು ಕಿವುಡುತನವನ್ನೆಲ್ಲಾ ಮೀರಿ ನಿಂತು ತನ್ನ ಪಾಲಿಗಿದ್ದ ಕತ್ತಲೆಯನ್ನೇ ಬೆಳಕು ಮಾಡಿಕೊಂಡು ತಾನೂ ಬೆಳಗಿ ಜಗತ್ತನ್ನೇ ಬೆಳಗಿದ ವಿಸ್ಮಯದೋಪಾದಿಯ ವಿಶ್ವದ ಅದ್ಭುತ ಸಾಧಕಿ ಜಗದ್ವಿಖ್ಯಾತ ಮಹಾ ಲೇಖಕಿ ಹೆಲನ್ ಕೆಲರ್ ಎಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.

   ನಗರದ ಕೃಷ್ಣಮೂರ್ತಿ ಪುರಂನಲ್ಲಿರುವ ಸುಶೀಲಾ ಬಾಯಿ ನಾಗೇಶ್ ರಾವ್ ಟ್ರಸ್ಟ್ ನ ವನಿತಾ ಸದನ ಮತ್ತು ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗ ಸಂಯುಕ್ತವಾಗಿ ವನಿತಾ ಸದನ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಹೆಲನ್ ಕೆಲರ್ ಜನ್ಮದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹೆಲನ್  ಕೆಲರ್  ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಹೆಲನ್ ಕೆಲರ್ ಎಂದರೆ ಇಡೀ ಪ್ರಪಂಚವೇ ನಿಬ್ಬೆರಗಾಗುವಂತೆ ಮಹದದ್ಭುತ ಸಾಧನೆ ಮಾಡಿದ ಜಗತ್ತು ಕಂಡ ಮೊಟ್ಟ ಮೊದಲ ವಿಶೇಷ ಚೈತನ್ಯ ಶಕ್ತಿಯ ಸಾಧಕಿಯೆಂದರು.

    ಕಣ್ಣಿದ್ದೂ ಕುರುಡರಂತಿರುವ, ಮೂಗಿದ್ದೂ, ಬಾಯಿದ್ದೂ ಮೂಕರಂತಿರುವ, ಕಿವಿಯಿದ್ದೂ ಕಿವುಡರಂತಿರುವ ನಮ್ಮ ಇವತ್ತಿನ ಜನರಿಗೆ ಇದಾವುದೂ ಇಲ್ಲದೆ ಜಗತ್ತನ್ನೇ ಗೆದ್ದು ಬದುಕಿ ತೋರಿಸಿದವರು ಹೆಲನ್ ಕೆಲರ್. ತಾನು ಬದುಕು ಕಟ್ಟಿಕೊಂಡದ್ದು ಮಾತ್ರವಲ್ಲದೆ ತಾನು ನಡೆದ ಬೆಳಕಿನ ದಾರಿಯಲ್ಲಿ ಎಲ್ಲರೂ ನಡೆಯುವಂತೆ ಪ್ರೇರಣೆ ನೀಡಿದವರು ಮತ್ತು ಪ್ರೇರೇಪಣೆ ಮಾಡಿದವರು ಅವರು. ಹೊರ ಗಣ್ಣಿಗಿಂತ ಒಳಗಣ್ಣು, ಹೊರ ಗಿವಿಗಿಂತ ಒಳಗಿವಿ ಅತ್ಯಂತ ಶಕ್ತಿಯುತವೆಂದು ಕತ್ತಲಿಂದ ಬೆಳಕಿನತ್ತ  ಹೇಗೆ ನಡೆಯ ಬೇಕೆಂಬುದಕ್ಕೆ ತೋರು ಬೆರಳಾಗಿ ಇವತ್ತಿಗೂ ಅವರು ಸತ್ತು ಹೋಗಿದ್ದರೂ ತಮ್ಮ ಅಸಾಧಾರಣ ಸಾಧನೆಗಳ ಮೂಲಕ ಮಾನವ ಕುಲ ಇರುವ ತನಕವೂ ಶಾಶ್ವತರು. ಸತ್ತು ಬದುಕುವುದೆಂದರೆ ಇದೇ ತಾನೆ? ಇಂಥ ಸಾಧಕಿ ಹೆಲನ್ ಕೆಲರ್ ರ ಸಾಧನೆಯ ಹೆಜ್ಜೆಗಳನ್ನು ಪ್ರತಿಯೊಬ್ಬರೂ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಮಾದರಿಯಾಗಿ ಅನುಸರಿಸಬೇಕೆಂದರು.

   ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಖ್ಯಾತ ಸಂಖ್ಯಾಶಾಸ್ತ್ರಜ್ಞ ಎಸ್. ಜಿ. ಸೀತಾರಾಮ್ ಅವರು ಮಾತನಾಡಿ, ಜೊತೆ ಜೊತೆಗೆ ಹೆಲನ್ ಕೆಲರ್ ಕುರಿತ ವಿಡಿಯೋ ತುಣುಕುಗಳನ್ನು ಪ್ರದರ್ಶಿಸುತ್ತಾ, ಫೋಟೋ ಸ್ಲೈಡ್ಸ್ ಗಳನ್ನು ತೋರಿಸುತ್ತಾ ವಿದ್ಯಾರ್ಥಿಗಳ ಗಮನವನ್ನು ಕೇಂದ್ರೀಕರಿಸಿಕೊಂಡು ಸವಿವರವಾಗಿ ತಿಳಿಸಿಕೊಟ್ಟರು.

   ಸುಶೀಲಾಬಾಯಿ ನಾಗೇಶ್ ರಾವ್ ಟ್ರಸ್ಟ್ ನ ಟ್ರಸ್ಟಿ ಶ್ರೀನಿವಾಸರಾವ್ ಅವರು ಪ್ರಸ್ತುತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಗಳಿಸಿರುವ ವಿದ್ಯಾರ್ಥಿಗಳಾದ ಎಂ.ಮಾನಸ, ಸೌಜನ್ಯ, ಜೈನಬಿ, ಉನ್ ಜಿಯಾ, ಚಂದನ, ಅಪೂರ್ವ ಹಾಗೂ ಪಿಯುಸಿಯ ಪ್ರಿಯಾಂಕ ಪ್ರಮೋದ್ ದೈವಜ್ಞ ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ನಂತರ ಮಾತನಾಡಿದ ಅವರು ಹೆಲನ್ ಕೆಲರ್ ರೀತಿ ವಿದ್ಯಾರ್ಥಿಗಳಾದ ತಾವುಗಳೆಲ್ಲರೂ ಚೆನ್ನಾಗಿ ಕಲಿತು ಬುದ್ಧಿವಂತರಾಗಿ ಸಾಧಕರಾಗ ಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

   ಹಾಗೆಯೇ ಇದೇ ವೇಳೆ  ಹೆಲನ್ ಕೆಲರ್ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಭಾಷಣ ಸ್ಪರ್ಧೆಯಲ್ಲಿ ತನುಶ್ರೀ (ಪ್ರ), ಪ್ರೇಮ (ದ್ವಿ),ಶ್ರೀನಿತ್ಯ( ತೃ), ಮತ್ತು ಗಾಯನ ಸ್ಪರ್ಧೆಯಲ್ಲಿ ತೇಜಸ್ವಿನಿ(ಪ್ರ), ಧನ್ಯ (ದ್ವಿ), ಮಹಾಲಕ್ಷ್ಮಿ (ತೃ), ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ದರ್ಶನ್ (ಪ್ರ), ಚಂದನ (ದ್ವಿ), ಭುವನೇಶ್ವರಿ (ತೃ), ಅವರುಗಳಿಗೆ ಮುಖ್ಯ ಶಿಕ್ಷಕಿ ಟಿ. ಶಿವಮ್ಮ ಅವರು ಬಹುಮಾನ ನೀಡಿ ಅಭಿನಂದಿಸಿದರು.

   ಸುಶೀಲಾಬಾಯಿ ನಾಗೇಶ್ ರಾವ್ ಟ್ರಸ್ಟ್ ನ ಭಾರತಿ ಅವರು ಅಧ್ಯಕ್ಷತೆ ವಹಿಸಿದ್ದರು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಟ್ರಸ್ಟಿನ ಕಾರ್ಯದರ್ಶಿ ರೂಪಾರಾಣಿ, ಉಪ ಕಾರ್ಯದರ್ಶಿ ಶ್ಯಾಮಲಾ ಜಯರಾಂ, ಟ್ರಸ್ಟಿ ಪದ್ಮಿನಿ, ಆಡಳಿತಾಧಿಕಾರಿ ಶ್ರೀಕಾಂತ್, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ, ಶಿಕ್ಷಕರಾದ ಸುರೇಶ್, ರವಿಕುಮಾರ್, ತ್ರಿವೇಣಿ, ಲಾವಣ್ಯ, ಸುಧಾ, ಶ್ರೀದೇವಿ, ಸರಳ,ಅರುಂಧತಿ ಹಾಗೂ ಓರಿಗಾಮಿತಜ್ಞ ಹೆಚ್. ವಿ. ಮುರಳೀಧರ್, ಕಲಾವಿದೆ ಹಾಗೂ ಲೇಖಕಿ ಡಾ. ಜಮುನಾ ರಾಣಿ ಮಿರ್ಲೆ ಇನ್ನಿತರರಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿನಿಯರಾದ ಯದುಶ್ರೀ ಮತ್ತು ಆಯುಷ ಪ್ರಾರ್ಥನೆ ಮಾಡಿದರು. ಶಿಕ್ಷಕ ರವಿಕುಮಾರ್ ಎಲ್ಲರನ್ನೂ ಸ್ವಾಗತಿಸಿದರು. ಕೊನೆಯಲ್ಲಿ ಶಿಕ್ಷಕ ಸುರೇಶ್ ವಂದನಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *